ಶ್ರೀವಿಜಯ
	ಸು. 850. ಪಂಪಪೂರ್ವಯುಗದ ಕವಿ.  ಕವಿರಾಜ ಮಾರ್ಗ ಎಂಬ ಗ್ರಂಥದ ಕರ್ತೃ. ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಹಲವು ಕಡೆ ಈ ಕವಿಯ ಹೆಸರು ಕಾಣಿಸಿಕೊಂಡಿದೆ. ಅನೇಕ ಪ್ರಮಾಣಗಳ ಆಧಾರದ ಮೇಲೆ ಕವಿರಾಜಮಾರ್ಗವನ್ನು ಬರೆದವನು ಶ್ರಿವಿಜಯ ಎಂದು ಅನೇಕ ವಿದ್ವಾಂಸರು ತರ್ಕಿಸಿದ್ದಾರೆ.

	ನೃಪತುಂಗಸಭಾಸದನಾದ ಶ್ರೀವಿಜಯನ ವ್ಯಕ್ತಿತ್ವದ ಚಿತ್ರಣ ಕವಿರಾಜ ಮಾರ್ಗದಲ್ಲಿ ತಕ್ಕಮಟ್ಟಿಗೆ ವಿವರಪೂರ್ಣವಾಗಿ ಬಂದಿದೆ (3ನೆಯ ಪರಿಚ್ಛೇದ, ಪದ್ಯ 218-30). ಇವನು ವ್ಯಾಕರಣ ಕಾವ್ಯ ನಾಟಕ ಲೋಕಕಲೆಗಳಲ್ಲಿ ನಿಷ್ಣಾತ ; ಕವಿವೃಷಭರ ಪ್ರಯೋಗಗಳಲ್ಲಿ ಕೃತಪರಿಚ ಯಬಲನಾಗಿದ್ದ; ಲಕ್ಷ್ಯಲಕ್ಷಣಗಳಲ್ಲಿ ಅಭಿಜ್ಞ; ಸಮಸ್ತಭಾಷಾವಿಶೇಷ ವಿಷಯಕುಶಲಿ; ಪರಮಕಾರುಣಿಕ; ಅಸೂಯೆಯಿಲ್ಲದವನು; ಅನೇಕಗುಣ ಸಮನ್ವಿತನಾದ ಇವನು ಪುರುಷವ್ರತನಿಶ್ಚಿತ (ಎಂದರೆ ಆಜೀವಪರ್ಯಂತ ಬ್ರಹ್ಮಚಾರಿ; ಜೈನಧರ್ಮಾನುಯಾಯಿಗೆ ಮಾತ್ರ ಬಳಸಲಾಗುತ್ತಿದ್ದ ವಿಶಿಷ್ಟ ಪಾರಿಭಾಷಿಕ ಪದ ಇದು). ಕವಿರಾಜಮಾರ್ಗದ ರಚನೆಯ ಕಾಲದಲ್ಲಿ (ಸು. 815-77) ವೈದಿಕಮತಾನುಯಾಯಿಯಾಗಿದ್ದ ನೃಪತುಂಗನೇ ಗ್ರಂಥಕರ್ತನಾಗಿದ್ದರೆ, ಜೈನನಾದ ಸಭಾಸದನೊಬ್ಬನ ವರ್ಣನೆ ಕೃತಿಯಲ್ಲಿ ಬರುವುದು ಅಸಂಭವ ಹಾಗೂ ಅಪ್ರಸಕ್ತ. ಶ್ರೀವಿಜಯನೇ ಕವಿರಾಜಮಾರ್ಗದ ಕರ್ತೃ ಎಂದು ಕೆಲವು ವಿದ್ವಾಂಸರು ಬಹು ಹಿಂದಿನಿಂದಲೂ ಮಾಡಿಕೊಂಡು ಬರುತ್ತಿರುವ ವಾದಕ್ಕೆ ಈ ಆಂತರಿಕಪ್ರಮಾಣ ತೀರ್ಮಾನದ ಸ್ವರೂಪವನ್ನು ಕೊಡಬಲ್ಲದ್ದಾಗಿದೆ.

	3ನೆಯ ಮಂಗರಸ (ಸು. 1508) ತನ್ನ ನೇಮಿಜಿನೇಶ ಸಂಗತಿಯಲ್ಲಿಯೂ ದೊಡ್ಡಯ್ಯ (ಸು. 1550) ತನ್ನ ಚಂದ್ರಪ್ರಭಚರಿತೆಯಲ್ಲಿಯೂ ಚಂದ್ರಪ್ರಭ ಪುರಾಣವನ್ನು ಬರೆದ ಒಬ್ಬ ಶ್ರೀವಿಜಯನನ್ನು ಹೊಗಳಿದ್ದಾರೆ.  ಈ ಕಾವ್ಯ ದೊರೆತಿಲ್ಲ. ಕವಿರಾಜಮಾರ್ಗದಲ್ಲಿ ಹೆಸರಿಸಿರುವ ಪರಮಶ್ರೀವಿ ಜಯಕವೀಶ್ವರನೇ ಪುರಾಣಕರ್ತನೆಂದೂ ಈ ಪುರಾಣಕರ್ತನೂ ಕವಿರಾಜ ಮಾರ್ಗಕಾರನೂ ಒಬ್ಬನೇ ವ್ಯಕ್ತಿಯೆಂದೂ ಊಹಿಸಲಾಗಿದೆ. ಆದರೆ ಹೀಗೆಂದು ಖಂಡಿತವಾಗಿ ಹೇಳಲು ಯಾವ ಆಧಾರವೂ ಇಲ್ಲ.

	ಜೀವಂಧರಚರಿತೆಯ ಭಾಸ್ಕರ ಕವಿ (ಸು. 1424) ವಿಜಯನ ಭಾವನನ್ನು ಸ್ಮರಿಸಿದ್ದಾನೆ. ದೇವಪ್ಪ ಕವಿ (ಸು. 1540) ಜೈನಪುರಾಣಕರ್ತರ ಸಾಲಿನಲ್ಲಿ ವಿಜಯನನ್ನು ಹೆಸರಿಸಿದ್ದಾನೆ. ಈ ವಿಜಯನು ಚಂದ್ರಪ್ರಭಪುರಾಣದ ಕರ್ತೃ ಶ್ರೀವಿಜಯನಾಗಿರಬಹುದು.

	ಶ್ರವಣಬೆಳಗೊಳದ ಶಾಸನವೊಂದರಲ್ಲಿ (ಸು. 977. ಜೈನಆಚಾರ್ಯ ಮಲ್ಲಿಷೇಣನ ಪ್ರಶಸ್ತಿಯನ್ನು ಕುರಿತದ್ದು) ಒಬ್ಬ ಶ್ರೀವಿಜಯನ ಉಲ್ಲೇಖವಿದೆ.  ಈತ ಯಾರೋ ತಿಳಿಯದು.

	ರಾಷ್ಟ್ರಕೂಟ 3ನೆಯ ಇಂದ್ರನ (914-29) ದಂಡನಾಯಕ ಶ್ರೀವಿಜಯನ ಪ್ರಶಸ್ತಿಯುಳ್ಳ ಶಾಸನವೊಂದು ಕಡಪ ಜಿಲ್ಲೆಯ ದಾನವುಲಪಾಡು ಎಂಬ ಸ್ಥಳದಲ್ಲಿ ದೊರೆತಿದೆ. ಶಾಸನದಲ್ಲಿ ಈತನಿಗೆ ಅನುಪಮ ಕವಿ, ಅ¾Âವಿಂಗೋಜ ಎಂಬ ವಿಶೇಷಣಗಳಿವೆ; ಈತ ಸಂನ್ಯಾಸವನ್ನು ಕೈಗೊಂಡು ಮೋಕ್ಷಪದವಿಯನ್ನು ಹೊಂದಿದನೆಂದು ಹೇಳಿದೆ. ಇಲ್ಲಿನ ವಿಶೇಷಣಗಳು  ನೃಪತುಂಗ ಸಭಾಸದನವರ್ಣನೆಯನ್ನು ನೆನಪಿಗೆ ತರುತ್ತವೆ. ನೃಪತುಂಗ ಸಭಾಸದ ಕವಿರಾಜಮಾರ್ಗಕಾರ ಶ್ರೀವಿಜಯನೂ ಈ ಶಾಸನದ ಶ್ರೀವಿಜಯನೂ ಒಬ್ಬನೇ ಇರಬಹುದು ಎಂಬ ಸಂದೇಹಕ್ಕೂ ಅವಕಾಶವಿದೆ. ನೃಪತುಂಗಸಭಾಸದ ಪೂರ್ವವಯಸ್ಸಿ ನವನಾಗಿದ್ದು ಇಂದ್ರನ ಕಾಲಕ್ಕೆ ವೃದ್ಧನಾಗಿ, ಸಂನ್ಯಾಸಿಯಾಗಿ ಸಮಾಧಿ ಮರಣವನ್ನು ಹೊಂದಿರಬಹುದು.  (ನೋಡಿ- ಕವಿರಾಜಮಾರ್ಗ)
	
	(ಎಮ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ